ಪರಿಪಕ್ವತಾ ಮನಶ್ಯಾಸ್ತ್ರ

ಪರಿಪಕ್ವತೆಯೇ ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಯ ಮುಖ್ಯ ಗುರಿ ಎಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ನಿಘಂಟಿನಲ್ಲಿ ಪರಿಣತೆಯ ಅರ್ಥವನ್ನು ಸಮಗ್ರ ಬೆಳವಣಿಗೆಯ ಘಟ್ಟವೆಂದು ಹೇಳಿದೆ. ಪರಿಪಕ್ವತೆಯ ಬಗ್ಗೆ ಮನಶಾಸ್ತ್ರ ಹೇಳುವ ವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಹುಡುಗುತನ ಅಥವಾ ಅಪರಿಕತ್ವ ನಡತೆ ಎಂಬ ಶಬ್ದಗಳು ವ್ಯಕ್ತಿಯ ಕಾರ್ಯಗಳಲ್ಲಿ ಕಂಡುಬರುವ ಆತನ ಅಸಮಗ್ರ ವಿಕಾಸವನ್ನು ಇಲ್ಲವೆ ಶೋಚನೀಯವಾದ ಕೆಲವು ಸ್ವಾಭಾವಲಕ್ಷಣಗಳನ್ನೂ ಕುರಿತು ಹೇಳುವ ಮಾತುಗಳಾಗಿವೆ. ಕೇವಲ ಬೆಳವಣಿಗೆಯ ದೃಷ್ಟಿಯಿಂದ ಪರಿಪಕ್ವತಾ ಮನಶಾಸ್ತ್ರ ಮನುಷ್ಯ ಜೀವಿತದ ಪ್ರೌಢಾವಸ್ಥೆಯನ್ನು ಎಂದರೆ ಒಬ್ಬ ವ್ಯಕ್ತಿಯ ಇಪ್ಪತ್ತರಿಂದ ಅರವತ್ತು ವರ್ಷಗಳ ಜೀವಿತಾವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಈ ಪ್ರೌಢಾವಸ್ಥೆಯ ಮೊದಮೊದಲ ವರ್ಷಗಳಲ್ಲಿ ಆ ವ್ಯಕ್ತಿಯ ಮಾನಸಿಕ ಕಾರ್ಯ ಭಾಗಗಳು ಗುಣ ವಿಶೇಷಗಳು ಮತ್ತು ಸಾಮಥ್ರ್ಯಗಳು ಇವುಗಳ ಬೆಳವಣಿಗೆ ತನ್ನ ಶಿಖರವನ್ನು ಮುಟ್ಟುತ್ತದೆ. ಮತ್ತು ಮಧ್ಯವಯಸ್ಸಿನಲ್ಲಿ ನಿಧಾನವಾಗಿ ಇಳಿಮುಖವಾಗಿ ವಾರ್ಧಕ್ಯದಲ್ಲಿ ಥಟ್ಟನೆ ತಳ ಮುಟ್ಟುತ್ತದೆ. 

ವಯಸ್ಸಿಗೆ ಬರುವುದೆಂದರೆ ಒಬ್ಬ ವ್ಯಕ್ತಿ ಸಕಲಾಂಶಗಳಲ್ಲೂ ಪಕ್ವತೆಯನ್ನೂ ಮುಟ್ಟಿದ್ದಾನೆಂದು ಅರ್ಥವಲ್ಲ. ಶರೀರದೃಷ್ಟ್ಯಾ ಆತ ಪಕ್ವತೆಗೆ ಬಂದಿರಬಹುದು. ಆದರೆ ಜ್ಞಾನದಲ್ಲೂ ಸಾಮಾಜಿಕವಾಗಿಯೂ ನೀತಿಯ ವಿಷಯದಲ್ಲೂ ಭಾವದ ವಿಷಯದಲ್ಲೂ ಆತನ ನಡತೆ ಬಾಲ್ಯ ತರುಣಾವಸ್ಥೆಗಳ ಮಟ್ಟದಲ್ಲೇ ಇರಬಹುದು. ಈ ಪ್ರಕಾರವಾಗಿ, ಸಾಧಾರಣ ತರುಣನೊಬ್ಬನ ನಡತೆಯಲ್ಲಿ ಪಕ್ವತೆ ಮತ್ತು ಅಪರಿಕ್ವತೆಗಳ ಸಮ್ಮಿಶ್ರಣದ ಪ್ರತಿಕ್ರಿಯೆ ಲಕ್ಷಣಗಳು ಗೋಚರಿಸಬಹುದು. ನಿಜವಾಗಿ ಪರಿಣಿತಿಯನ್ನು ಮುಟ್ಟಿರುವ ವ್ಯಕ್ತಿ ತನ್ನ ಎಲ್ಲ ಕ್ಷೇತ್ರಗಳಲ್ಲೂ ಪರಿಪಕ್ವತೆಯನ್ನು ಮುಟ್ಟಿರಬೇಕು.

ಶಾರೀರಕ ಪರಿಪಕ್ವತೆ ಶರೀರದ ಸಕಲ ಅಂಗಗಳೂ ಎಂದರೆ ತೋಳುಗಳು ತೊಡೆಗಳು ಮೂಳೆಗಳು ಹಲ್ಲುಗಳು ಲೈಂಗಿಕಾಂಗಗಳು ಮತ್ತು ಮಿದುಳು ಮುಂತಾದವೆಲ್ಲವು ಗಾತ್ರದಲ್ಲಿ ಪರಸ್ಪರ ಪ್ರಮಾಣದಲ್ಲಿ ಮತ್ತು ಕಾರ್ಯಭಾಗಗಳಲ್ಲಿ ಪರಿಪಕ್ವವಾಗಿ ಬೆಳೆದಿವೆ ಎಂಬುದನ್ನು ತೋರಿಸುತ್ತದೆ. ಶರೀರದ ಪಕ್ವತೆ, ಅದರಲ್ಲೂ ಮುಖ್ಯವಾಗಿ ಲೈಂಗಿಕಾಂಗಗಳ ಪಕ್ವತೆ, ವ್ಯಕ್ತಿಯ ದೃಷ್ಟಿಕೋನ, ಆಸಕ್ತಿಗಳು ಮತ್ತು ಎಲ್ಲ ಸಾಮಾಜಿಕ ಪರಿಸ್ಥಿತಿಗಳಲ್ಲೂ ನಡವಳಿಕೆಯ ಗುಣ ಇತ್ಯಾದಿಗಳಲ್ಲಿ ಬದಲಾವಣೆಯನ್ನು ತರುತ್ತದೆ. ಅಹಂ ಭಾವನೆಯೇ ಬದಲಾಯಿಸಿ ಹೋಗುತ್ತದೆ. ತರುಣನಂತೆ ತೋರುವ ವ್ಯಕ್ತಿ ತಾನು ತರುಣನೆಂದೇ ನೆನೆಯುತ್ತಾನೆ ಮತ್ತು ತನ್ನ ಗಾತ್ರಕ್ಕೂ ಶರೀರ ಸಂಪತ್ತಿಗೂ ತಕ್ಕಂತೆ ನಡೆದುಕೊಳ್ಳಬೇಕೆಂದು ಭಾವಿಸುತ್ತಾನೆ. ಈ ರೀತಿಯಾಗಿ ಆತನ ನಡವಳಿಕೆಯಲ್ಲಿ ಹೆಚ್ಚು ಪಕ್ವತೆ ಉದಿಸುತ್ತದೆ. ಜ್ಞಾನದ ಪಕ್ವತೆ ಮನಸ್ಸು ಪರಿಪೂರ್ಣವಾಗಿ ಬೆಳೆದಿದೆ ಎಂಬುದನ್ನು ತೋರುತ್ತದೆ. ಸಾಧಾರಣ ಬುದ್ಧಿಯ ಹುಡುಗರು ಮನಸ್ಸು ತನ್ನ ಪರಿಣತೆಯ ಮಟ್ಟವನ್ನು ಹದಿಮೂರರಿಂದ ಹದಿನೈದು ವರ್ಷಗಳೊಳಗೆ ಮುಟ್ಟಿರುತ್ತದೆಯೆಂದೂ ಉತ್ತಮ ಬುದ್ಧಿಯ ಹುಡುಗರಲ್ಲಿ ಈ ಪರಿಣತೆಯ ಮಟ್ಟವನ್ನು ಕೆಲವು ವೇಳೆ ಹದಿನಾರರಿಂದ ಇಪ್ಪತ್ತೈದರೊಳಗೆ ಮುಟ್ಟುತ್ತದೆಂದೂ ವೈಕಾಸಿಕ ಶಾಸ್ತ್ರವ್ಯಾಸಂಗಗಳು ತಿಳಿಸುತ್ತವೆ. ಧೃಢವಾಗಿ ಬೇರೂರಿರುವ ಲಕ್ಷಣದಿಂದ ತಮ್ಮ ಪರಿಣತೆಯನ್ನು ತೋರುವ ಆಸಕ್ತಿಗಳೂ ಮನಸ್ಸಿನ ಪಕ್ವತೆಯನ್ನು ತೋರುವ ಆಸಕ್ತಿಗಳೂ ಮನಸ್ಸಿನ ಪಕ್ವತೆಯನ್ನು ತೋರುತ್ತವೆ. ವಯಸ್ಸು ಬೆಳೆಯುತ್ತಾ ಕೆಲವು ಆಸಕ್ತಿಗಳೂ ದೃಢತರವಾಗಿಯೂ ಮತ್ತೆ ಕೆಲವು ದುರ್ಬಲವಾಗಿಯೂ ಬೆಳೆದರೂ ಪ್ರಧಾನಶಕ್ತಿಗಳೆಲ್ಲ ಒಂದೇ ಸಮನಾಗಿ ಉಳಿಯುತ್ತವೆ. ಪರಿಪಕ್ವ ಜ್ಞಾನವುಳ್ಳ ವ್ಯಕ್ತಿ ಆಧುನಿಕ ಸಮಸ್ಯೆಗಳಲ್ಲಿ ಆಸಕ್ತಿಯನ್ನು ತೋರುತ್ತಾನೆ; ಅಂಥವನಲ್ಲಿ ವ್ಯಕ್ತಿಗತಾಸಕ್ತಿಗಳು ಹಿಂದಕ್ಕೆ ಸರಿದು ವಸ್ತುಗತಾಸಕ್ತಿಗಳಿಗೂ ಮತ್ತು ತನಗೆ ಹೊರಸಾಗಿರುವ ವಿಷಯಗಳ ಮೇಲೆ ನಿರ್ದಿಷ್ಟ ದೃಷ್ಟಿಗಳಿಗೂ ಅಭಿಪ್ರಾಯಗಳಿಗೂ ಎಡೆಗೂಡುತ್ತವೆ.
ಆಸಕ್ತಿಗಳ ಪರಿಣತಿಯ ಜತೆಗೆ ಪಕ್ವತೆ ಅವಸ್ಥಾನಗಳ ಪಕ್ವತೆಯಲ್ಲಿ ಪ್ರಕಟಗೊಳ್ಳುತ್ತದೆ. ಈ ಅವಸ್ಥಾನಗಳು ಪೂರ್ವಾಗ್ರಹವಿಮುಕ್ತಿ, ವೈಶಾಲ್ಯ, ತೆರೆದ ಮನಸ್ಸು, ಭಿನ್ನಾಭಿಪ್ರಾಯವನ್ನು ಹೊಂದುವಷ್ಟು ಧೈರ್ಯ, ಪ್ರಚಾರವನ್ನು ಎದುರಿಸುವ ಸಾಮಥ್ರ್ಯ ಮುಂತಾದ ಲಕ್ಷಣಗಳಿಂದ ಲಕ್ಷಿತವಾಗಿವೆ.

ಮೂಡನಂಭಿಕೆಗಳಿಂದ ಹೊರತಾಗಿರುವುದು. ಸತರ್ಕವಾಗಿ ಸಂದೇಹಿಸುವಿಕೆ, ವಿಮರ್ಶೆಯಿಲ್ಲದೆ ಅಭಿಪ್ರಾಯಗಳನ್ನು ನಂಬಿಕೆಗಳನ್ನು ಸ್ವೀಕರಿಸದಿರುವಿಕೆ-ಇವು ಜ್ಞಾನ ಪರಿಪೂರ್ಣವಾಗಿ ಬೆಳೆದಿರುವುದಕ್ಕೆ ಮತ್ತೆ ಕೆಲವು ಲಕ್ಷಣಗಳು. ಆತ್ಮ ಸಮೀಕ್ಷಣೆ ಅಥವಾ ಇತರರು ತನ್ನನ್ನು ನೋಡುವಂತೆ ತನ್ನನ್ನು ತಾನೆ ನೋಡಿಕೊಳ್ಳುವುದು. ತನ್ನ ಸಾಮಥ್ರ್ಯಗಳನ್ನೂ ಅಸಾಮಥ್ರ್ಯಗಳನ್ನೂ ಆದಷ್ಟು ನಿಷ್ಕøಷ್ಟವಾಗಿ ತುಲನೆ ಮಾಡುವುದು-ಇವು ತಿಳಿವಳಿಕೆಯ ಪರಿಣತೆಯ ಮುಖ್ಯ ಗುರುತುಗಳು. ಇದರಿಂದ ಏನು ತಿಳಿದುಬರುತ್ತದೆಯೆಂದರೆ, ಪಕ್ವಜ್ಞಾನದ ವ್ಯಕ್ತಿ ತನ್ನ ಪ್ರಾಪ್ತಿಗಳನ್ನೂ ಮಿತಿಗಳನ್ನೂ ನಿಜವಾದ ನೇರದಿಂದ ನೋಡಿ ತನ್ನ ವಿಷಯಕವಾಗಿ ವಾಸ್ತವ ಭಾವನೆಯನ್ನು ಕಲ್ಪಿಸಿಕೊಂಡಿರುತ್ತಾನೆ-ಎಂಬುದು. ತನ್ನ ನಿಜಸ್ಥಿತಿಯನ್ನು ಅರಿತುಕೊಂಡು ತನ್ನ ವಿಷಯದಲ್ಲಿ ತಾನು ಅಷ್ಟಾಗಿ ಮರುಳಾಗದೆ, ಜೀವನ ಪ್ರಸಂಗವನ್ನು ಎದರಿಸುವ ವ್ಯಕ್ತಿ ಆತ. ತನ್ನ ಮಿತಿಗಳಿಗೆ ತಾನು ಆಳವಡುವ ಮತ್ತು ಅದೇ ಸಮಯದಲ್ಲಿ ತನ್ನ ಸಂಭಾವ್ಯಕಗಳನ್ನು ವೃದ್ಧಿಸಿಕೊಳ್ಳುವ ಸಾಮಥ್ರ್ಯವನ್ನು ತನ್ನ ಒಳದೃಷ್ಟಿಯಿಂದ ಪಡೆದುಕೊಂಡಿರುವಾತನವ. ಆದರೆ ಜ್ಞಾನದ ವಿಷಯದಲ್ಲಿ ಅರಬೆಂದಿರುವ ತರುಣ. ವಾಸ್ತವವನ್ನು ಎದುರಿಸಲು ಒಪ್ಪ. ಏಕೆಂದರೆ ಅದು ಆತನನ್ನು ನೋಯಿಸುತ್ತದೆ. ಮಗುವಿನಂತೆ ಆತ ನಾನು ಇಂಥವನಾಗಬೇಕೆಂಬ ಕಾಂಕ್ಷೆಯಲ್ಲೇ ಮಗ್ನನಾಗಿ ವಸ್ತುತಃ ತನ್ನಲ್ಲಿರಬಹುದಾದ ದೌರ್ಬಲ್ಯಗಳನ್ನು ಕಾಣಲೇ ಒಲ್ಲ. ಸ್ವವೈಭವದ ಮರುಳನ್ನೇ ಆತ ಮರೆಸುತ್ತಲೋ ಇಲ್ಲದಿದ್ದರೆ ಇತರರ ಮರುಕವನ್ನು ಗಮನವನ್ನೂ ಸೆಳೆಯಲು ತನ್ನ ದೌರ್ಬಲ್ಯವನ್ನೂ ಮಿತಿಮೀರಿ ಹೇಳಿಕೊಳ್ಳುತ್ತಲೋ ಇರುತ್ತಾನೆ.

ಭಾವ ಪಕ್ವತೆ ಪರಿಣತಿಯನ್ನು ಹೊಂದಿರುವ ತರುಣನ ಮುಖ್ಯ ಲಕ್ಷಣಗಳಲ್ಲಿ ಒಂದು. ಸ್ವಮೋಹ ಮುಕ್ತಿ ಮತ್ತು ದ್ವಂದ್ವ ಸ್ವಭಾವ ಮುಕ್ತಿ ಎಂದು ಭಾವ ಪಕ್ವತೆಯ ಲಕ್ಷಣ ನಿರ್ದೇಶ ಮಾಡಿದ್ದಾರೆ. ಕೇಂದ್ರೀಕೃತ ಅಹಂಭಾವದಿಂದ ಬಿಡುಗಡೆ ಹೊಂದಿರುವುದು ಮತ್ತು ಸಾಮಾಜಿಕ ಪ್ರೇರಣೆಗಳನ್ನು ಕಾರ್ಯಗತ ಮಾಡುವ ಪ್ರವೃತ್ತಿ ಇವನ್ನೇ ಭಾವಪಕ್ವತೆ ಎನ್ನಬಹುದು. ವಾಸ್ತವತಾ ತತ್ತ್ವಾಂಗೀಕಾರಭಾವವನ್ನು ಇದು ಸೂಚಿಸುತ್ತದೆ. ಮತ್ತು ಭಾವಪರಿಣತನಾದ ತರುಣ ಈ ಕ್ಷಣದ ಭಾವನೆಗಳಿಂದ ವಿಚಲಿತನಾಗುವುದಿಲ್ಲ; ತನ್ನ ವ್ಯಕ್ತಿತ್ವದ ಭಾವವನ್ನು ಅವಲಂಬಿಸಿ ಅದು ತನ್ನ ತಾರ್ಕಿಕ ಪ್ರಜ್ಞೆಯನ್ನು ಕೆಡವಲು ಅವಕಾಶ ಕೊಡುವುದಿಲ್ಲ. ಇದರ ಅರ್ಥ ಅವನೊಬ್ಬ ತನ್ನ ಜೀವನದಲ್ಲಿ ಭಾವಕ್ಕೆ ಎಡೆಯನ್ನೇಕೊಡದ ಕಾವಿಲ್ಲದ ಬರಿಯ ಬುದ್ಧಿವಂತನೆಂದೂ ವಾಸ್ತವತಾನಿಷ್ಠನೆಂದೂ ಅಲ್ಲ. ಭಾವಪಕ್ವತೆಯನ್ನು ಮುಟ್ಟಿರುವ ಮನುಷ್ಯ ಪ್ರಕಟವಾಗಲಿಕ್ಕೆ ತಿಳಿಸುವ ಒಂದು ಭಾವ ಪ್ರತಿಕ್ರಿಯೆಯನ್ನು ತಡೆದು ತನ್ನ ಸಮಗ್ರ ವ್ಯಕ್ತಿತ್ವಕ್ಕೆ ಉಚಿತವಾಗಿ ಸಂಘಟಿತ ಪ್ರತಿಕ್ರಿಯೆಯನ್ನು ತೋರಬಲ್ಲ. ಅಪಕ್ವನೋ ತನ್ನ ವ್ಯಕ್ತಿತ್ವದ ಹಿಡಿತಕ್ಕೆ ಸಿಕ್ಕದೆ ವಿಚ್ಛಿದ್ರವಾದ ರೀತಿಯಲ್ಲಿ ಪ್ರತಿಕ್ರಿಯೆಯನ್ನು ತೋರಿಸುತ್ತಾನೆ. ಸಂಘಟಿತ ಭಾವ ಪ್ರತಿಕ್ರಿಯೆ ಭಾವ ಪ್ರಕಟನೆಯ ಸ್ಥೈರ್ಯವನ್ನು ದ್ಯೋತಿಸುತ್ತದೆ. ಅಪರಿಕತ್ವಭಾವದ ಒಂದು ಮನೋಭಾವದಿಂದ ಮತ್ತೊಂದಕ್ಕೆ ಅಲೆದಾಡುವವನೂ ನಿಷ್ಕಾರಣವಾಗಿ ಹಾರಾಡುವುದು ಮತ್ತು ಜೋಲು ಬೀಳುವುದು ಮುಂತಾದ ಮನಃಪ್ರಕೃತಿಯುಳ್ಳವನೂ ಆಗಿರುತ್ತಾನೆ.

ಭಾವಪರಿಪಕ್ವತೆಯ ಪ್ರಧಾನ ಲಕ್ಷಣ ಯಾವುದೆಂದರೆ ಸ್ವಾತಂತ್ರ್ಯಭಿಲಾಷೆ ಮತ್ತು ಆತ್ಮಾವಲಂಬನ. ಇತರರನ್ನು ಆಶ್ರಯಿಸದೆ ತಾನೇ ಇತರರಿಗೆ ಆಸರೆಯಾಗಿ ಯಾವಾತನಿದ್ದಾನೋ ಆತ ಪಕ್ವತೆಯನ್ನು ಮುಟ್ಟಿದ್ದಾನೆ ಎಂದು ಸಾಮಾನ್ಯವಾಗಿ ಹೇಳಬಹುದು. ಮನಶ್ಯಾಸ್ತ್ರ ರೀತ್ಯಾ ಪಕ್ವ ಮನುಷ್ಯ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬಲ್ಲ ಮತ್ತು ಸ್ವಂತ ಪ್ರವೃತ್ತಿಯಿಂದಲೂ ಆತ್ಮಪ್ರತ್ಯಯದಿಂದಲೂ ಜೀವನವನ್ನು ಎದುರಿಸಬಲ್ಲ. ತನ್ನ ಕೆಲಸಗಳಿಗೂ ವಿಚಾರಗಳಿಗೂ ತಾನೆ ಹೊಣೆ ಎಂಬ ಭಾವ ಆತನಿಗುಂಟು. ಅತ ಇತರರನ್ನು ಗೌರವಿಸಬಲ್ಲ. ಸ್ವತಂತ್ರರಾಗ ಬೇಕಾದರೆ, ನಾವು ನಮ್ಮ ತಾಯಿ-ತಂದೆಗಳ ಆಶ್ರಯವನ್ನು ತ್ಯಜಿಸಬೇಕು. ತಾಯಿ ತಂದೆಗಳಿಗೆ ಅಂಟಿಕೊಂಡಿರುವುದು ಮತ್ತು ತಂದೆತಾಯಿಗಳೂ ತಮ್ಮ ಮಕ್ಕಳ ವಿಷಯವನ್ನು ತುಂಬ ತಲೆಗೆ ಹಚ್ಚಿಕೊಂಡಿರುವುದು ಇವು ಭಾವ ಸ್ವಾತಂತ್ರ್ಯ ಸಂಪಾದನೆಗೆ ಅಡ್ಡಿ ಬಂದು ತನ್ಮೂಲಕ ತಾರುಣ್ಯದಲ್ಲಿ ಇವು ಭಾವ ಪಕ್ವತೆಯನ್ನು ಪಡೆಯುವುದಕ್ಕೂ ವಿಘ್ನಗಳನ್ನು ತಂದೊಡ್ಡುತ್ತವೆ. ಆಶಾಭಂಗದ ಅನುಭವಗಳನ್ನು ಆದಷ್ಟು ಹೊರತಳ್ಳಲು ಸಾಧ್ಯವಾಗುವಂತೆ ತಮ್ಮ ಪರಿಸರಗಳನ್ನು ನಿಯಂತ್ರಿಸುವ ಸಾಮಥ್ರ್ಯ, ಅರೋಗ್ಯ ಸಂಪಾದನೆ, ದೈಹಿಕ ಮತ್ತು ಮಾನಸಿಕ ಶ್ರಮಗಳನ್ನು ತಗ್ಗಿಸಲು ಬಳಲಿಕೆಯ ನಿವೃತ್ತಿ, ಕೆಲಸದ ಒತ್ತಡವನ್ನು ನಿವಾರಿಸಲು ದಕ್ಷವಿಧಾನಗಳ ಸ್ವೀಕರಣ ಅಕಾಂಕ್ಷೆಗಳನ್ನು ವಾಸ್ತವತೆಯ ಮಟ್ಟದಲ್ಲಿರಿಸಿಕೊಳ್ಳುವುದು, ಭಾವದ ಒತ್ತಡವನ್ನು ಹೊರಚೆಲ್ಲಲು ಕೆಡುಕಲ್ಲದ ಉಪಾಯಗಳನ್ನು ಎಂದರೆ ಹವ್ಯಾಸಗಳು, ವ್ಯಾಯಾಮ, ಆಟಗಳು, ಕೈಗೆಲಸ ಹಾಸ್ಯಯುತ ಮನೋಭಾವ-ಮುಂತಾದುವುಗಳನ್ನು ಬೆಳೆಸಿಕೊಳ್ಳವುದು ಭಾವಪಕ್ವತೆಯನ್ನು ಹೊಂದಲು ಸಹಕಾರಿಗಳು.
ಸಾಮಾಜಿಕ ಪಕ್ವತೆ : ತರುಣನಲ್ಲಿ ಸಾಮಾಜಿಕ ಪಕ್ವತೆ ತಾನು ಇತರ ಮಾನವರೊಂದಿಗೆ ಹೊಂದಿಕೊಳ್ಳುವ ಮತ್ತು ಅವರನ್ನು ತನಗೆ ಸರಿಹೊಂದಿಸಿಕೊಳ್ಳುವ ಸಾಮಥ್ರ್ಯದಲ್ಲಿದೆ. ಸಂಘದಲ್ಲಿ ಬೆರೆತಿರುವುದು, ಮರುಕ ಮತ್ತು ಸಹಾನುಭೂತಿ ನ್ಯಾಯ ನಡವಳಿಕೆ, ಭಾವಸಾಮರಸ್ಯ, ಮರ್ಯಾದೆ, ಸಭ್ಯತೆ, ಪ್ರಾಮಾಣಿಕತೆ, ಆತ್ಮ ವಿಶ್ವಾಸ, ಸಹಕಾರ ಪ್ರವೃತ್ತಿ, ಮುಂದಾಳುತನ, ಮತ್ತು ಸಂತೋಷಚಿತ್ತತೆ ಮುಂತಾದವು ಅದರ ಲಕ್ಷಣದಲ್ಲಿ ಸೇರಿವೆ, ಸಂಘದೊಡನೆ ಹೊಂದಿ ಆವರ್ತಿಸಿ ಕೊಂಡಿರುವುದು, ಅನುವರ್ತಿಸಿರುವುದು, ಪರಿಣತ ವ್ಯಕ್ತಿಯ ಲಕ್ಷಣ. ಆತನ ಸಂಘಾನುವರ್ತನೆಗೆ ಕಾರಣ ಅಲ್ಲಿನ ನಡವಳಿಕೆಗಳಿಗೆಲ್ಲ ತನಗೆ ಸಮ್ಮತ, ಇಲ್ಲವೆ ಅದನ್ನು ವಿರೋಧಿಸಲು ತನಗೆ ಅಂಜಿಕೆ ಎಂಬುದಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೈಯಕ್ತಿಕ ಇಷ್ಟಗಳನ್ನು ಸಂಘದ ಒಟ್ಟು ಜನರ ಇಷ್ಟಕ್ಕೆ ಸರಿಹೊಂದಿಸಿಕೊಳ್ಳುವುದು ಅವಶ್ಯಕವೆಂಬ ಪರಿಜ್ಞಾನದಿಂದ ಅದು ಬಂದದ್ದು, ಅಷ್ಟೆ.
ಕುಟುಂಬವನ್ನು ಪರಿತ್ಯಜಿಸದೆ ಅಥವಾ ಅದರ ವಿಷಯದಲ್ಲಿ ಔದಸೀನ್ಯವನ್ನು ತಾಳದೆ, ಮನಸಾ ಅದರಿಂದ ದೂರ ಸರಿಯುವುದು, ಪೌರತ್ವದ ಹೊಣೆಗಳನ್ನೂ ಕರ್ತವ್ಯಗಳನ್ನೂ ನಿರ್ವಹಿಸಲು ಸಿದ್ಧನಾಗಿರುವುದು, ಪೂರ್ವಾಗ್ರಹಗಳಿಂದ ಮುಕ್ತನಾಗಿರುವುದು, ಸ್ವಾವಲಂಬನ ಸಾಮಥ್ರ್ಯ, ಸ್ವಪರಿಪೂರ್ಣತೆ, ಸ್ನೇಹಿತರ ವಿಷಯದಲ್ಲಿ ಪ್ರೀತಿಯಿಂದ ಕೂಡಿದ ವಾಸ್ತವದೃಷ್ಟಿ ಸಾಮಾಜಿಕ ಕೌಶಲಗಳನ್ನೂ ವಿಶಿಷ್ಟವೂ ಕಲ್ಪಕವೂ ಆದ ಲೈಗಿಂಕ ಸಂಬಂಧಗಳಿಂದ ಲಕ್ಷಿತವಾದ ಮನಸ್ಸಾಮರಸ್ಯಗಳನ್ನೂ ಬೆಳಸಿಕೊಳ್ಳುವುದು ; ಈ ಮುಂತಾದವು ಸಾಮಾಜಿಕ ಪಕ್ವತೆಯನ್ನು ಸಿದ್ಧಿಸಿಕೊಳ್ಳುವ ಕೆಲವು ಉಪಾಯಗಳು.
ನೈತಿಕ ಪಕ್ವತೆ : ಇದು ಸಹ ಮನಸ್ಸಿನ ಸಮಗ್ರ ಪರಿಪಕ್ವತೆಯನ್ನು ಅಳೆಯುವ ಪ್ರಧಾನ ಮಾನದಂಡಗಳಲ್ಲಿ ಒಂದು. ಅಸಹನೆ, ಅಂಧಾಭಿಮಾನ ಅನೌದಾರ್ಯ, ಆಜ್ಞೇಯತಾವಾದಿತ್ವ, ನಾಸ್ತಿಕತೆ ಇವುಗಳಿಂದ ಮುಕ್ತನಾಗಿರುವುದು, ಕೆಲವು ಧಾರ್ಮಿಕ ಸಂಪ್ರದಾಯಗಳ ಸಾಮಾಜಿಕ ಮೌಲ್ಯಗಳನ್ನು ಅರಿತಿರುವುದು, ಜೀವನದ ವಿಷಯದಲ್ಲಿ ವಾಸ್ತವ ಪ್ರಸಂಗಗಳಿಗೆ ಮುಖತಿರುಗಿಸಿ ಓಡದೆ ಮುಖಕೊಟ್ಟು ನಿಲ್ಲುವ ಸಾಮಥ್ರ್ಯಗಳನ್ನು ಕೊಡುವ ಒಂದು ಆರೋಗ್ಯಕರವಾದ ದರ್ಶನದೃಷ್ಟಿ-ಇವು ಈ ಪಕ್ವತೆಯಲ್ಲಡಗಿವೆ.
ವಾಸ್ತವವೂ ಆಚರಿಸಲು ಸಾಧ್ಯವೂ ಆದ ಒಂದು ನೀತಿಮೌಲ್ಯಗಳ ನಿಯಮಾವಳಿ ನೈತಿಕ ಪರಿಪಕ್ವತೆಯನ್ನು ಮುಟ್ಟಿರುವ ಮನುಷ್ಯನಲ್ಲಿದೆ. ಈ ನೈತಿಕ ಮೌಲ್ಯಗಳು ಆತನ ವಿಶಾಲವಾದ ಸಾಮಾಜಿಕಾನುಭವಗಳಿಂದ ರೂಪಿತವಾಗಿವೆ. ಇವು ವಾಸ್ತವವೂ ಆಚರಿಸಲು ತಕ್ಕವೂ ಆಗಿದ್ದರೂ ಸ್ಥಿರತೆ ಮತ್ತು ಸುಸಾಂಗತ್ಯಗಳಿಂದ ಕೂಡಿವೆ. ಪರಿಸರ ಬದಲಾಯಿಸಿದಂತೆಲ್ಲ ಇವೂ ಬದಲಾಯಿಸುವುದಿಲ್ಲ. ನೈತಿಕವಾಗಿ ಪಕ್ವವಾಗಿರುವ ತರುಣ ಈಗಿರುವ ಕಾಯದೆ ಕಟ್ಟಳೆಗಳಿಗೂ ನಿಯಾಮವಳಿಗೂ ಅವುಗಳೆಲ್ಲವನ್ನೂ ಆತನೊಪ್ಪದಿದ್ದರೂ ಸಹ ಸಾಧ್ಯವಾದಷ್ಟು ಮಟ್ಟಿಗೆ ಸರಿಹೊಂದಿಸಿಕೊಂಡು ನಡೆಯುತ್ತಾನೆ. ಅವನ್ನು ಆಚರಣೆಗೆ ತರುವುದು ಅಸಾಧ್ಯವೆಂದು ಅವು ಅನ್ಯಾಯ ಅಥವಾ ಕ್ರೂರವೆಂದೂ ಕಂಡುಬಂದಾಗ ಆತ ಅವನ್ನು ಕಾಲಕಾಲಕ್ಕೆ ಟೀಕಿಸಬಹುದು. ಅವನ್ನು ಬದಲಾಯಿಸಲು ಕಾರ್ಯಕ್ರಮ ಕೈಕೊಳ್ಳಬಹುದು. ನೈತಿಕ ಪರಿಣತೆಯನ್ನು ಮುಟ್ಟಿರುವ ಮನುಷ್ಯ ಕಾನೂನುಗಳನ್ನು ಮುರಿಯುವುದನ್ನು ದುರ್ಜನರೆಂದು ಕೇಡಿಗರೆಂದೂ ಬಗೆಯುವುದಿಲ್ಲ. ಈ ಕಾನೂನು ವಿರೋಧಿಗಳ ವಿಷಯದಲ್ಲಿ ಆತ ಆದಷ್ಟು ಸಹನೆಯನ್ನು ತೋರುತ್ತಾನೆ.											(ಬಿ.ಡಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ